ಜಮಾಲಾಬಾದ್
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನಲ್ಲಿ, ಕುದುರೆಮುಖ ಶ್ರೇಣಿಯ ಚಾಚಿನ ಕೊನೆಯಲ್ಲಿ 1788 ಎತ್ತರಕ್ಕೆ ಎದ್ದು ನಿಂತಿರುವ ಕಡಿದಾದ ಶಿಖರದ ಮೇಲೆ ಕಟ್ಟಲಾದ ದುರ್ಗಾ. ಆ ಜಿಲ್ಲೆಯಲ್ಲಿ ಅಳಿದುಳಿದಿರುವ ಕೋಟೆಕೊತ್ತಳಗಳಲ್ಲೆಲ್ಲ ಹೆಚ್ಚು ಸ್ವಾರಸ್ಯಕರವಾದ್ದು. ಆ ಶಿಖರದ ಆಡಿವಾರದಲ್ಲಿರುವ ನರಸಿಂಹಂಗಡಿ ಎಂಬ ಹಳೆಯ ಊರಿಗೂ ಜಮಾಲಾಬಾದ್ ಎಂಬ ಹೊಸ ಹೆಸರೇ ಅಂಟಿಕೊಂಡಿದೆ. ಆ ಊರಿಗೆ ನಡ ಎಂಬ ಹೆಸರೂ ಇದೆ. ದುರ್ಗಕ್ಕೆ ಇರುವುದು ಒಂದೇ ಒಂದು ಇಕ್ಕಟ್ಟಿನ ದಾರಿ. ಫೆಬ್ರವರಿ-ಮೇ ತಿಂಗಳುಗಳ ಅವಧಿಯನ್ನು ಬಿಟ್ಟರೆ ಉಳಿದ ಕಾಲದಲ್ಲಿ ಆ ದಾರಿ ದುರ್ಗಮವಾದ್ದು.

	1784ರಲ್ಲಿ ಮಂಗಳೂರಿನಿಂದ ಹಿಂದಿರುಗುತ್ತಿದ್ದ ಟೀಪು ಸುಲ್ತಾನ ಆ ಶಿಖರದ ದುರ್ಗಮ ಸ್ಥಿತಿಸ್ಥಾನಗಳನ್ನು ಮನಗಂಡು, ಅಲ್ಲಿಯ ಪಾಳುಬಿದ್ದ ಹಳೆಯ ಕೋಟೆಯ ಅವಶೇಷಗಳ ಮೇಲೆ ಹೊಸ ದುರ್ಗವೊಂದನ್ನು ನಿರ್ಮಿಸಿ, ಅದಕ್ಕೆ ತನ್ನ ತಾಯಿ ಜಮಾಲ್ ಬೀಯ ಗೌರವಾರ್ಥವಾಗಿ ಜಮಾಲಾಬಾದ್ ಎಂದು ಹೆಸರಿಟ್ಟು, ಅಲ್ಲಿ ನಾನೂರು ಯೋಧರ ಕಾವಲು ದಂಡೊಂದನ್ನೂ ಅಡೆವಾರದ ಜಮಾಲಾಬಾದಿನಲ್ಲಿ ತನ್ನ ಅಧಿಕಾರಿಯೊಬ್ಬನನ್ನೂ ನಿಲ್ಲಿಸಿದ.

	ಕಲ್ಲಿನಲ್ಲಿ ಕಡಿಯಲಾದ ಮೆಟ್ಟಲುಗಳನ್ನು ಶ್ರಮವಹಿಸಿ ಹತ್ತಿ ಕೋಟೆಯನ್ನು ಪ್ರವೇಶಿಸುವವರು, ಮೇಲ್ಮಟ್ಟದ ಯಂತ್ರಶಿಲ್ಪ ಜ್ಞಾನವನ್ನು ಬಳಸಿ ಬಂಡೆಗಳನ್ನು ಕೊರೆದು ನಿರ್ಮಿಸಲಾಗಿರುವ ಓಣಿಗಳನ್ನು ಕಾಣಬಹುದು. ದುರ್ಗದ ಗೋಡೆಗಳನ್ನೂ ಕೊತ್ತಳಗಳನ್ನು ಪ್ರವೇಶದ್ವಾರಗಳನ್ನು ಬೆಣಚುಕಲ್ಲಿನ ದಿಮ್ಮಿಗಳಿಂದ ರಚಿಸಲಾಗಿದೆ. ಕೋಟೆಯೊಳಗೆ ಎರಡು ಕೆರೆಗಳೂ ಒಳ್ಳೆಯ ನೀರಿನ ಒಂದು ಸಣ್ಣ ಬುಗ್ಗೆಯೂ ಇವೆ. ಯೂರೋಪಿನಲ್ಲಿ ತಯಾರಿಸಲಾದ ಫಿರಂಗಿಯೊಂದು ಕೋಟೆಯ ಜೀರ್ಣ ಕೊತ್ತಲವೊಂದರಲ್ಲಿ ಕೆಡೆದುಬಿದ್ದಿರುವುದನ್ನು ಇಂದಿಗೂ ಕಾಣಬಹುದು. ದುರ್ಗವನ್ನು ತಲುಪುವ ದಾರಿ ದುಸ್ತರವಾದ್ದರಿಂದ, ಹಿಂದೆ ಆಕ್ರಮಣ ಕಾಲದಲ್ಲಿ ಕೆಳಗಿನಿಂದ ಯೋಧರು ಮೇಲಕ್ಕೆ ಹೋಗಿ ಹೋರಾಡುವುದು ಎಷ್ಟು ಕಷ್ಟಸಾಧ್ಯವಿತ್ತೋ, ಮೇಲಿಂದ ಸೈನಿಕರು ಕೆಳಕ್ಕಿಳಿದು ಆಕ್ರಮಣಕಾರರನ್ನು ತಡೆಗಟ್ಟುವುದೂ ಅಷ್ಟೇ ಕಷ್ಟದ ಕೆಲಸವಿದ್ದಿರಬೇಕು. ಕೆಲವೇ ಸೈನಿಕರು ಫಿರಂಗಿಗಳ ಸಹಾಯದಿಂದ ದುರ್ಗದ ಎಷ್ಟು ದೊಡ್ಡ ರಕ್ಷಣಾಸೇನೆಯನ್ನು ಸ್ಥಾನಬದ್ಧಗೊಳಿಸುವುದು ಸುಲಭವೇ ಆಗಿದ್ದಿರಬೇಕು. 

	1799ರಲ್ಲಿ ಮೈಸೂರು ಯುದ್ಧ ನಡೆಯುತ್ತಿದ್ದಂತೆ ಜಮಾಲಾಬಾದಿನ ಅಡಿವಾರದ ಊರನ್ನು ಕೊಡಗಿನವರು ನಾಶಗೊಳಿಸಿದರು. ಯುದ್ಧದಲ್ಲಿ ಟೀಪುವಿಗೆ ಆದ ಪರಾಭವದಿಂದಾಗಿ ಪಶ್ಚಿಮ ಕರಾವಳಿ ಪ್ರದೇಶದ ಆಧಿಪತ್ಯ ಇಂಗ್ಲಿಷರದಾಯಿತು. ಅದೇ ವರ್ಷ ಅವರು ಜಮಾಲಾಬಾದ್ ದುರ್ಗವನ್ನು ವಶಪಡಿಸಿಕೊಂಡರಾದರೂ ಕೆಲವೇ ದಿನಗಳಲ್ಲಿ ಮೈಸೂರು ಸಿಂಹಾಸನದ ಸುಳ್ಳು ಹಕ್ಕುದಾರನೊಬ್ಬನ ಬೆಂಬಲಿಗನಾದ ತಿಮ್ಮಾನಾಯಕನೆಂಬಾತ ಇಂಗ್ಲಿಷರನ್ನು ಓಡಿಸಿ ಕೋಟೆಯನ್ನು ಆಕ್ರಮಿಸಿಕೊಂಡ. ಮೂರು ತಿಂಗಳುಗಳ ಸತತ ಮುತ್ತಿಗೆಯ ಅನಂತರ (1800) ಇಂಗ್ಲಿಷರು ಆ ದುರ್ಗವನ್ನು ಸ್ವಾಧೀನಪಡಿಸಿಕೊಂಡರು.

ಹೀಗೆ 18-19ನೆಯ ಶತಮಾನಗಳ ಸಂಧಿಕಾಲದಲ್ಲಿ ಸಾಕಷ್ಟು ಐತಿಹಾಸಿಕ ಮಹತ್ತ್ವಹೊಂದಿದ್ದ ಜಮಾಲಾಬಾದ್ ದುರ್ಗ ಇಂದು ಹಾಳುಬಿದ್ದಿದೆ. ಅಡಿವಾರದ ಜಮಾಲಾಬಾದ್ ಹಾಳೂರೇ ಆಗಿದೆ.				(ಕೆ.ವಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ